ದಿವಾಕರನಂದಿ
ಒಬ್ಬ ಜೈನ ಮುನಿ; ಅದಕ್ಕಿಂತ ಮಿಗಿಲಾಗಿ ಒಬ್ಬ ಕನ್ನಡ ವ್ಯಾಖ್ಯಾನಕಾರ. ಇವನ ಗುರುಪರಂಪರೆಯ ಆಧಾರದ ಮೇಲೆ ಹೇಳುವುದಾದರೆ ಈತ ಕೊಂಡಕುಂದಾನ್ವಯ ಮೂಲಸಂಘ ದೇಸಿಗಗಣದ ಪುಸ್ತಕಗಚ್ಚಕ್ಕೆ ಸೇರಿದಾತ. ಗೃಧ್ರ ಪಿಂಛಾಚಾರ್ಯ ಎಂಬ ಹೆಸರಿದ್ದ ಉಮಾಸ್ವಾಮಿ ಅಥವಾ ಉಮಾಸ್ವಾತಿ ಸಂಸ್ಕøತದಲ್ಲಿ ರಚಿಸಿರುವ ತತ್ತ್ವಾರ್ಥ ಸೂತ್ರವೆಂಬ ಜೈನಾಗಮ ಗ್ರಂಥಕ್ಕೆ ಈತ ಕನ್ನಡದಲ್ಲಿ ವ್ಯಾಖ್ಯಾನ ಬರೆದಿದ್ದಾನೆ. ಈ ವ್ಯಾಖ್ಯಾನದ ಸಮಾಪ್ತಿಭಾಗದಲ್ಲಿ ಇದು ಸಕಲಾಗಮ ಸಂಪನ್ನ ಶ್ರೀಮಚ್ಚಂದ್ರಕೀರ್ತಿ ಭಟ್ಟಾರಕ ಪದ್ಮನಂದಿ ಸಿದ್ಧಾಂತದೇವ ಶ್ರೀಪಾದ ಪ್ರಸಾದಾಸಾದಿತ ಸಮಸ್ತ ಸಿದ್ಧಾಂತಾಮೃತ ಪಾರಾವಾರಗ ಶ್ರೀಮದ್ಧಿವಾಕರ (ಣಂದಿ) ಭಟ್ಟಾರಕ ಮುನೀಂದ್ರ ವಿರಚಿತ ತತ್ತ್ವಾರ್ಥಸೂತ್ರಾನುಗತ ಕರ್ಣಾಟಕ ಲಘುವೃತ್ತಿಯೊಳ್- ಎಂದು ಹೇಳಿದ್ದಾನೆ. ಜಡರೂ ಬಾಲಕರೂ ಬುಧರೂ ತತ್ತ್ವಾರ್ಥವನ್ನು ತಿಳಿದು ಪಾಪವನ್ನು ಕಳೆದುಕೊಂಡು ಸಮ್ಯಕ್ತ್ವವನ್ನು ಹೊಂದಿ ಪರಮಸ್ಥಾನವನ್ನು ಪಡೆಯಲೆಂದು ಸಿದ್ಧಾಂತ ರತ್ನಾಕರರು ತತ್ತ್ವಾರ್ಥಸೂತ್ರಕ್ಕೆ ಕನ್ನಡದಲ್ಲಿ ವೃತ್ತಿಯನ್ನು ರಚಿಸಿದರೆಂದು ನಗರದ 57ನೆಯ ಶಾಸನದಿಂದ ತಿಳಿದುಬರುತ್ತದೆ. ದಿವಾಕರನೊಂದಿಗೆ ಉಭಯ ಸಿದ್ಧಾಂತ ರತ್ನಾಕರ ಎಂಬ ಬಿರುದಿರುವಂತೆ ತಿಳಿದು ಬರುತ್ತದೆ. ಕ್ರಿ. ಶಕ 984ರ ಒಂದು ಶಾಸನದಿಂದ ಈತ ಚಂದ್ರಕೀರ್ತಿ ಭಟ್ಟಾರಕರ ಅಗ್ರ ಶಿಷ್ಯನೆಂದೂ ಅರ್ಹತ್‍ತತ್ತ್ವ ವಸ್ತುವಿಸ್ತಾರಕನೆಂದು ವರ್ಣಿತನಾಗಿದ್ದಾನೆ. 1068ರಲ್ಲಿದ್ದ ಶಾಂತಿನಾಥ ಕವಿಯ ಸುಕುಮಾರ ಚರಿತದಿಂದ ತಿಳಿದುಬರುವಂತೆ ಈತ ವ್ಯಾಕರಣ ತರ್ಕ ಸಿದ್ಧಾಂತ ಈ ಮೂರೂ ವಿದ್ಯೆಗಳಲ್ಲಿ ಪ್ರವೀಣನಾಗಿದ್ದ. ಶ್ರವಣಬೆಳಗೊಳದ ಒಂದು ಶಾಸನ ಕೂಡ ಈತನನ್ನು ಹೀಗೇ ಕೀರ್ತಿಸಿದೆ. ತತ್ತ್ವಾರ್ಥಸೂತ್ರ ಜೈನಧರ್ಮದಲ್ಲಿ ದಿಗಂಬರ ಶ್ವೇತಾಂಬರ ಎರಡೂ ಪರಂಪರೆಗಳಲ್ಲಿ ಮಾನ್ಯತೆಯನ್ನು ಪಡೆದಿರುವ ಪೂಜ್ಯಗ್ರಂಥ; ದ್ರವ್ಯಾನುಯೋಗಕ್ಕೆ ಸಂಭಂಧಿಸಿದಂತೆ ಸಂಸ್ಕøತದಲ್ಲಿ ಇದೇ ಮೊದಲ ಗ್ರಂಥ. ಈ ಗ್ರಂಥದ ಮೇಲೆ ಎರಡೂ ಪರಂಪರೆಗಳಲ್ಲಿ ವಿವಿಧ ವ್ಯಾಖ್ಯಾನಗಳು ರಚನೆಯಾಗಿರುವುದು ಇದರ ಪ್ರಾಮುಖ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇಂಥ ಒಂದು ಶ್ರೇಷ್ಠ ಗ್ರಂಥಕ್ಕೆ ದಿವಾಕರಣಂದಿ ಕನ್ನಡ ವ್ಯಾಖ್ಯಾನವನ್ನು ರಚಿಸಿದ್ದಾನೆ. ಮೂಲದಲ್ಲಿರುವಂತೆಯೆ ಇದರಲ್ಲೂ 10 ಅಧ್ಯಾಯಗಳಿವೆ. ದಿವಾಕರಣಂದಿ ಇಲ್ಲಿ ಮೂಲಸೂತ್ರಗಳನ್ನು ವ್ಯಾಖ್ಯಾನಿಸಿರುವುದೇ ಅಲ್ಲದೇ ಅವುಗಳ ವಿವರಣೆಗೆಂದು ಗೊಮ್ಮಟಸಾರ, ತ್ರಿಲೋಕಸಾರ ಗ್ರಂಥಗಳಿಂದ ಪ್ರಾಕೃತ ಗಾಹೆಗಳನ್ನು ಉದ್ಧರಿಸಿ ಅವನ್ನೂ ಪದಶಃ ಅರ್ಥೈಸಿದ್ದಾನೆ.
(ಎಸ್.ಎಚ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ